ರಿಚರ್ಡ್ ಜೆಫ್ರಿಸ್
ರಿಚರ್ಡ್ ಜೆಫ್ರಿಸ್ (1848-1887). ಇಂಗ್ಲಿಷ್ ಕಾದಂಬರಿಕಾರ ಹಾಗೂ ಪ್ರಕೃತಿ ವಿಜ್ಞಾನಿ.
ದಕ್ಷಿಣ ಇಂಗ್ಲೆಂಡಿನ ವಿಲ್ಟ್‍ಷಿರ್ ಕೌಂಟಿಯ ಸ್ವಿನ್‍ಡನ್ ಎಂಬ ಸ್ಥಳದ ಬಳಿ ಈತ ಜನಿಸಿದ. ತಂದೆ ಒಬ್ಬ ರೈತ. ಸ್ಥಳೀಯ ಪತ್ರಿಕೆಯ ಕಚೇರಿಯೊಂದರಲ್ಲಿ ಉದ್ಯೋಗದಲ್ಲಿದ್ದುಕೊಂಡು ಬರೆವಣಿಗೆಯನ್ನು ರೂಢಿಸಿಕೊಂಡ. ವಿಲ್ಟ್‍ಷಿರ್‍ನ ಕಾರ್ಮಿಕನನ್ನು ಕುರಿತಂಥ ಈತನ ಪತ್ರವೊಂದು ದಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿ ಈತ ಬೆಳಕಿಗೆ ಬರಲವಕಾಶವಾಯಿತು. ಅನಂತರ ಪಾಲ್‍ಮಾಲ್ ಗಜೆಟ್ ಪತ್ರಿಕೆಗೆ ಬರೆಯತೊಡಗಿದ. ಗೇಮ್‍ಕೀಪರ್ ಎಟ್ ಹೋಮ್ (1878) ಎಂಬುದು ಈತನ ಮೊದಲ ಕೃತಿ. ಇದು ಮತ್ತು ವೈಲ್ಡ್ ಲೈಫ್ ಇನ್ ಎ ಸದರ್ನ್ ಕೌಂಟಿ (1879) ಎಂಬ ಮತ್ತೊಂದು ಕೃತಿ ನಾಡಿನ ಜೀವನವನ್ನು ಸವಿವರವಾಗಿ ಚಿತ್ರಿಸುವಂಥ ಬರೆಹಗಳು. ಅನಂತರ ಬಂದ ಈತನ ಕೃತಿಗಳೆಂದರೆ-ದಿ ಅಮೆಚೊರ್ ಪೋಚರ್ (1880), ವುಡ್ ಮ್ಯಾಜಿಕ್ (1880), ರೌಂಡ್ ಎಬೌಟ್ ಎ ಗ್ರೇಟ್ ಎಸ್ಟೇಟ್ (1881), ದಿ ಓಪನ್ ಏರ್ (1885), ಪ್ರಕೃತಿ ವರ್ಣತೆಯನ್ನು ಕುರಿತಂಥ ಇಂಥವೇ ಇನ್ನೂ ಕೆಲವು ಕೃತಿಗಳನ್ನೂ ಈತ ಬರೆದ. ತಾನು ತನ್ನ ಹುಡುಗಾಟದ ಪ್ರಸಂಗಗಳನ್ನು ಚಿತ್ರಿಸುವ ಬೆವಿಸ್ (1882), ಲಂಡನ್ ನಗರ ಕಣ್ಮರೆಯಾದ ಮೇಲೆ ಏನಾಗುತ್ತದೆ ಎಂಬುದನ್ನು ಚಿತ್ರಿಸುವ ರಂಜನೆಯ ಲಘುಕೃತಿ ಆಫ್ಟರ್ ಲಂಡನ್ ಆರ್ ವೈಲ್ಡ್ ಇಂಗ್ಲೆಂಡ್ (1885) ಎಂಬ ಕಾದಂಬರಿಗಳು ಈತನ ಸಾಹಿತ್ಯ ಪ್ರತಿಭೆಯನ್ನು ಎತ್ತಿತೋರಿಸುತ್ತವೆ. ಸ್ಟೋರಿ ಆಫ್ ಮೈ ಹಾರ್ಟ್ (1883) ಎಂಬುದು ಈತನ ಅಂತರ್ಜೀವನದ ಒಂದು ಆದರ್ಶಚಿತ್ರಣ. ಆರು ವರ್ಷಗಳವರೆಗೆ ಈತ ಅನಾರೋಗ್ಯದಿಂದ ನರಳಿ ಕೊನೆಗೆ ಮರಣಹೊಂದಿದ. ಸಸ್ಯಗಳನ್ನೂ ಪ್ರಾಣಿಗಳನ್ನೂ ಕುರಿತಂತೆ ವರ್ಣನಾತ್ಮಕ ಗ್ರಂಥಗಳನ್ನೂ ಬರೆದ ಜೆಫ್ರಿಸ್óನ ವರ್ಣನೆಯಲ್ಲಿ ವೈಜ್ಞಾನಿಕ ಚಾತುರ್ಯವನ್ನು ಕಾಣಬಹುದು.