ADVERTISEMENT

ಲಜ್ಜೆಗೆಟ್ಟ ಬೆದರಿಕೆ

Updated - February 16, 2023 06:29 pm IST

ಬಿಬಿಸಿಯ ಮೇಲಿನ ತೆರಿಗೆ ಸಮೀಕ್ಷೆಯಂತಹ ಕ್ರಮಗಳು ಭೀತಿಯ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನಗಳು

ನವದೆಹಲಿ ಮತ್ತು ಮುಂಬೈನ ಬಿಬಿಸಿ ಕಚೇರಿಗಳ ಮೇಲೆ ಎರಡು ದಿನಗಳ ಆದಾಯ ತೆರಿಗೆ ಸಮೀಕ್ಷೆಯಲ್ಲಿ, ಸದ್ಯ ಭಾರತದ ಆಡಳಿತಗಾರರ ಇತಿಹಾಸ ಬಗೆದು ಅವರು ಮಾಡಿದ್ದ ಕೃತ್ಯಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಲು ಉತ್ಸುಕತೆ ತೋರಿರುವ ಬ್ರಿಟನ್‌ನ ಗೌರವಾನ್ವಿತ ಸಾರ್ವಜನಿಕ ಪ್ರಸಾರಕ ಬಿಬಿಸಿಯನ್ನು ಬೆದರಿಸುವ ಪ್ರಯತ್ನ ಕಾಣುತ್ತಿದೆ. ಸಮೀಕ್ಷೆಗೆ ಬಂದ ಅಧಿಕಾರಿಗಳು “ವರ್ಗಾವಣೆ ಬೆಲೆ” ಮತ್ತು “ಲಾಭದ ತಿರುವು” ಗಳಿಗೆ ಸಂಬಂಧಿಸಿದ ಆರೋಪಗಳನ್ನು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಸಮೀಕ್ಷೆಯು ಬಿಬಿಸಿ “ಇಂಡಿಯಾ: ದಿ ಮೋದಿ ಕ್ವಶ್ಚನ್” ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರ ಬಿತ್ತರಿಸಿದ ಕೆಲವೇ ದಿನಗಳಲ್ಲಿ ನಡೆದಿದೆ ಎಂಬುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೂಲಭೂತವಾಗಿ ಲೆಕ್ಕಪತ್ರ ವಿಭಾಗದ ಸಮೀಕ್ಷೆ ಮಾಡಲು ಹೋದ ಆದಾಯ ತೆರಿಗೆ ಸಿಬ್ಬಂದಿ ಮಾಧ್ಯಮ ಸಿಬ್ಬಂದಿಯನ್ನೂ ಪ್ರಶ್ನಿಸಿರುವುದು ಅವರನ್ನು ಬೆದರಿಸುವ ಕ್ರಿಯೆ ಎಂದು ಮಾತ್ರ ಅರ್ಥೈಸಬಹುದು. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೆಲ ದಿನಗಳ ಹಿಂದೆ ಈ ಸಾಕ್ಷ್ಯಚಿತ್ರದ ಮೊದಲ ಭಾಗ ಪ್ರಸಾರವಾದಾಗ ಐಟಿ ನಿಯಮಗಳು, ೨೦೨೧, ಮತ್ತು ಐಟಿ ಕಾಯ್ದೆ, ೨೦೦೦, ಸೆಕ್ಷನ್ ೬೯ರಡಿಯಲ್ಲಿ ಪ್ರದತ್ತ ತುರ್ತು ಅಧಿಕಾರಗಳನ್ನು ಬಳಸಿ ಡಿಜಿಟಲ್ ಮಾಧ್ಯಮಗಳಿಗೆ ಸಾಕ್ಸ್ಯಚಿತ್ರದ ಎಲ್ಲ ಲಿಂಕುಗಳನ್ನು ನಿಷ್ಕ್ರಿಯಗೊಳಿಸಲು, ಈ ಕುರಿತು ಮಾಡಿದ ಎಲ್ಲ ಟ್ವೀಟುಗಳನ್ನು ತೆಗೆದು ಹಾಕಲು ಆದೇಶಿಸಿತು. ಇನ್ನು ಬಿಜೆಪಿ ವಕ್ತಾರರೊಬ್ಬರು ಬಿಬಿಸಿಯನ್ನು “ಕರಪ್ಟ್ ಕಾರ್ಪೊರೇಷನ್” ಎಂದು ಕರೆದಿದ್ದೂ ಸೇರಿದಂತೆ ಇತರ ಹೇಳಿಕೆಗಳು ವಿಮರ್ಶಾತ್ಮಕ ಮಾಧ್ಯಮಗಳು ಮಾಡಿದ ಕೆಲಸವನ್ನು ಅಲ್ಲಗಳೆಯುವ ಪ್ರಯತ್ನ ಎಂದೇ ತೋರುತ್ತದೆ. ಬಿಬಿಸಿ ಮೇಲಿನ ಸಮೀಕ್ಷೆ ಈ ಸರ್ಕಾರದ ಇಂತಹ ಮೊದಲ ಕ್ರಮವೇನೂ ಅಲ್ಲ. ಈ ಹಿಂದೆ ೨೦೨೧ರಲ್ಲಿ ಡಿಜಿಟಲ್ ಸುದ್ದಿ ಸಂಸ್ಥೆಗಳಾದ

ADVERTISEMENT

ನ್ಯೂಸ್‌ಲಾಂಡ್ರಿಯ ಮೇಲೆ ಐಟಿ ದಾಳಿ, ನ್ಯೂಸ್‌ಕ್ಲಿಕ್ ಮೇಲೆ ಇಡಿ ದಾಳಿ ಮತ್ತು ದೈನಿಕ್ ಭಾಸ್ಕರ್ ಪತ್ರಿಕಾ ಸಮೂಹದ ಮೇಲೆ ಐಟಿ ದಾಳಿ ಮತ್ತು ೨೦೧೭ರಲ್ಲಿ ಎನ್.ಡಿ.ಟಿ.ವಿ. ಮೇಲೆ ಸಿಬಿಐ ದಾಳಿಗಳು ನಡೆದಿದ್ದವು. ಕಳೆದ ವರ್ಷ, ಡಿಜಿಟಲ್ ಮಾಧ್ಯಮಗಳಿಗೆ ಅನುದಾನ ನೀಡುವ ಇಂಡಿಪೆಂಡೆಂಟ್ ಮತ್ತು ಪಬ್ಲಿಕ್-ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ ಮತ್ತು ಅದರ ಅಂಗ ಸಂಸ್ಥೆ ಸೆಂಟರ್ ಫಾರ್ ಪಾಲಿಸಿ ರಿಸರ್ಚಿನ ಮೇಲೆ ಸಹ ಇಂತಹ ಸಮೀಕ್ಷೆಗಳನ್ನು ಆದಾಯ ತೆರಿಗೆ ಇಲಾಖೆ ನಡೆಸಿತ್ತು. ಈ ಎಲ್ಲ ಸುದ್ದಿ ಸಂಸ್ಥೆಗಳೂ ಈ ಸರ್ಕಾರವನ್ನು ವಿಮರ್ಶಿಸಿದ್ದವು ಎಂಬುದು ಈ ಎಲ್ಲ ದಾಳಿಗಳ ನಡುವಿನ ಸಮಾನ ಎಳೆಯಾಗಿದೆ.

ಜಾಗತೀಕರಣಗೊಂಡ ಜಗತ್ತಿನಲ್ಲಿ ದಾಪುಗಾಲಿಡುತ್ತಿರುವ ಆರ್ಥಿಕತೆಯ ಅಭಿವೃದ್ಧಿಶೀಲ ರಾಷ್ಟ್ರವಾಗಿ ಭಾರತದ ಮೇಲ್ಮೆ ಅದು ಸಾಂವಿಧಾನಿಕವಾಗಿ ಖಾತರಿಪಡಿಸಿದ ಸಾಂಸ್ಥಿಕ ಸ್ವಾತಂತ್ರ್ಯಗಳು ಮತ್ತು ಎಲ್ಲರ ಅಧಿಕಾರಗಳಿಗೆ ಅಂಕುಶ ಇರುವ ಪ್ರಜಾಪ್ರಭುತ್ವವಾಗಿದೆ ಎಂಬುದು. ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸಿದ ಆದರೆ ಸಾಂಸ್ಥಿಕ ನಿಯಮಗಳು ಮತ್ತು ಮೌಲ್ಯಗಳಿಗೆ ಬದ್ಧವಾಗಿರದ ನಿರಂಕುಶ ಆಡಳಿತಗಳಿಗಿಂತ ಭಿನ್ನವಾಗಿದೆ ಎಂಬುದು. ಅಧಿಕಾರದಲ್ಲಿರುವವರನ್ನು ಆಡಳಿತದ ಎಡರು-ತೊಡರುಗಳಿಗೆ ಹೊಣೆಗಾರರನ್ನಾಗಿಸುವಲ್ಲಿ ಪತ್ರಿಕಾ ಸ್ವಾತಂತ್ರ್ಯದ ಪಾತ್ರ ಹಿರಿದು. ಮಾಧ್ಯಮ ಸಂಸ್ಥೆಗಳು ಅಹಿತಕರ ಪ್ರಶ್ನೆಗಳನ್ನು ಎತ್ತಿದರೂ, ಸರ್ಕಾರದ ಪ್ರತಿಕ್ರಿಯೆಯು ವಾಸ್ತವಿಕ ನೆಲೆಯಲ್ಲಿ ಸಮಂಜಸವಾಗಿರಬೇಕು. ಬಿಬಿಸಿಯ ಸಾಕ್ಷ್ಯಚಿತ್ರಕ್ಕೆ ಬಂದ ಪ್ರತಿಕ್ರಿಯೆ ಖಂಡಿತ ಹಾಗಿರಲಿಲ್ಲ. ಸಾಕ್ಷ್ಯಚಿತ್ರವನ್ನು ಸರ್ಕಾರ ಬ್ಲಾಕ್ ಮಾಡಲು ಹವಣಿಸುತ್ತಿರುವಾಗ ಅದು ಎಡವುತ್ತಿರುವಂತೆ ಕಂಡು ಬಂದಿತು. ಈಗ ಬಿಬಿಸಿ ಕಚೇರಿಗಳಲ್ಲಿ ಈ ಸಮೀಕ್ಷೆಯೊಂದಿಗೆ ಅದು ಮಾಧ್ಯಮಗಳಿಗೆ ಬೆದರಿಕೆ ಒಡ್ಡುತ್ತಿರುವಂತೆ ತೋರುತ್ತಿದೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಇಮೇಜಿಗೆ ಒಳ್ಳೆಯದಲ್ಲ. ಅದಕ್ಕಿಂತಲೂ ಮುಖ್ಯವಾಗಿ ಇದು ದೇಶದ ನಾಗರೀಕರ ಸ್ವಾತಂತ್ರ್ಯಗಳಿಗೆ ಒಡ್ಡಿದ ಅಪಾಯವಾಗಿದೆ.

This editorial has been translated from English, which can be read here.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT

  翻译: